ಪೈನಾಪಲ್ ಜ್ಯಾಮ್ / Pineapple Jam

Click here for English version.

ಪೈನಾಪಲ್ ಎಂದರೆ ಸಾಮಾನ್ಯವಾಗಿ ಎಲ್ಲರಿಗೂ ಇಷ್ಟವೇ. ಎಷ್ಟೊಂದು ವಿಧಗಳಲ್ಲಿ ನಾವು ಅದರ ರುಚಿಯನ್ನು ನೋಡಿಯೇ ಇರುತ್ತೇವೆ. ಹಣ್ಣಿನ ಸಿಪ್ಪೆ ತೆಗೆದು ಹಾಗೇ ಹೆಚ್ಚಿಕೊಂಡು ತಿನ್ನಲೂ ಚೆನ್ನಾಗಿರುತ್ತದೆ. ಇದನ್ನು ಬಳಸಿ ಅನೇಕ ಬಗೆಯ ಅಡಿಗೆಗಳು, ಪಾನೀಯಗಳು ಮತ್ತು ಸಿಹಿ ತಿಂಡಿಗಳನ್ನು ತಯಾರಿಸುತ್ತಾರೆ.
ತುಂಬ ದಿನಗಳ ಹಿಂದೆ ಪೈನಾಪಲ್ ಜ್ಯಾಮ್ ಮಾಡಿದಾಗ ತೆಗೆದಿಟ್ಟ ಫೋಟೋ ಹಾಗೇ ಇತ್ತು. ಹಾಗಾಗಿ ಇವತ್ತಿನ ಪೋಸ್ಟಿಂಗ್ ಗೆ ಜ್ಯಾಮ್ ತಯಾರಿಸುವ ವಿಧಾನವನ್ನೇ ಹಾಕೋಣವೆನಿಸಿತು. ಈ ಜ್ಯಾಮ್ ನ್ನು ಬ್ರೆಡ್ ಗೆ ಸವರಿಕೊಂಡು ತಿನ್ನಬಹುದು, ಅಲ್ಲದೆ ದೋಸೆ ಅಥವಾ ಚಪಾತಿಯೊಡನೆ ಹಾಕಿಕೊಳ್ಳಲೂ ಚೆನ್ನಾಗಿರುತ್ತದೆ. ಜ್ಯಾಮ್ ರುಚಿಯೆಂದು ಬಹಳ ತಿನ್ನಬೇಡಿ; ಏಕೆಂದರೆ ಅತಿಯಾಗಿ ತಿಂದರೆ ಪೈನಾಪಲ್ ಉಷ್ಣಕಾರಕ :-&


ತಯಾರಿಸಲು ಬೇಕಾಗುವ ಸಮಯ: 30 - 35 ನಿಮಿಷಗಳು

ಬೇಕಾಗುವ ಸಾಮಗ್ರಿಗಳು:
ಸಿಪ್ಪೆ ತೆಗೆದು ತುರಿದುಕೊಂಡ ಪೈನಾಪಲ್ - 5 1 / 2  ಲೋಟ (ರಸವನ್ನೂ ಸೇರಿಸಿ)
ಸಕ್ಕರೆ - 4 1 / 2 ಲೋಟ (ಪೈನಾಪಲ್ ನ ಸಿಹಿ ಅಂಶವನ್ನು ನೋಡಿಕೊಂಡು ಹಾಕಿ)
ಏಲಕ್ಕಿ 2 - 3
ನಿಂಬೆಹಣ್ಣು - 2
ಕಾಳುಮೆಣಸಿನ ಪುಡಿ (ಬೇಕಿದ್ದರೆ) - 1 / 4 ಚಮಚ

ಮಾಡುವ ವಿಧಾನ:
ಪೈನಾಪಲ್ ತುರಿ, ಸಕ್ಕರೆ, ನಿಂಬೆರಸ ಇಷ್ಟನ್ನೂ ಸೇರಿಸಿ ಹದವಾದ ಉರಿಯಲ್ಲಿ ಕುದಿಯಲಿಡಿ.
ಮಿಶ್ರಣ ಚೆನ್ನಾಗಿ ಕುದಿದು ಸ್ವಲ್ಪ ಗಟ್ಟಿಯಾಗಿ ಜೇನುತುಪ್ಪದ ಹದಕ್ಕೆ ಬಂದಾಗ ಅದಕ್ಕೆ ಕಾಳುಮೆಣಸಿನ ಪುಡಿ ಮತ್ತು ಏಲಕ್ಕಿ ಪುಡಿ ಸೇರಿಸಿ ಉರಿಯಿಂದ ಇಳಿಸಿ ಮುಚ್ಚಿಡಿ.
ಜ್ಯಾಮ್ ತಣ್ಣಗಾದ ನಂತರ ಗಾಳಿಯಾಡದ ಕಂಟೇನರ್ ಗೆ ಹಾಕಿಡಿ. ಚೆನ್ನಾಗಿ ಕುದಿಸಿಟ್ಟರೆ ಇದು 2 ತಿಂಗಳವರೆಗೂ ಚೆನ್ನಾಗಿರುತ್ತದೆ.
ಈ ಜ್ಯಾಮ್ ನ್ನು ಬ್ರೆಡ್, ದೋಸೆ ಅಥವಾ ಚಪಾತಿಯೊಡನೆ ಹಾಕಿಕೊಂಡು ತಿನ್ನಬಹುದು.


ಟಿಪ್ಸ್:
  •  ಪೈನಾಪಲ್ ಸಿಪ್ಪೆ ತೆಗೆದನಂತರ ಹಣ್ಣಿನ ಮಧ್ಯದಲ್ಲಿರುವ ಗಟ್ಟಿ ಭಾಗವನ್ನೂ ತೆಗೆದು, ನಂತರವೇ ತುರಿಯಿರಿ.
  • ಸಾಮಾನ್ಯವಾಗಿ ಪೈನಾಪಲ್ ಜ್ಯಾಮ್ ಗೆ ಸಕ್ಕರೆ ಜಾಸ್ತಿ ಬೇಕು. ಪೈನಾಪಲ್ ತುಂಬ ಸಿಹಿಯಾಗಿದ್ದರೆ ಸಕ್ಕರೆಯ ಪ್ರಮಾಣವನ್ನು ಸ್ವಲ್ಪ ಕಡಿಮೆ ಮಾಡಬಹುದು.

ಕಾಮೆಂಟ್‌ಗಳು