ಬೇಸನ್ ಲಾಡು । ಕಡ್ಲೆಹಿಟ್ಟಿನ ಲಾಡು

ಹಬ್ಬ ಹಾಗೂ ವಿಶೇಷ ಸಮಾರಂಭಗಳಲ್ಲಿ ಸಾಮಾನ್ಯವಾಗಿ ತಯಾರಿಸುವ ಸಿಹಿತಿಂಡಿಗಳ ಸಾಲಿನಲ್ಲಿ ಬೇಸನ್ ಲಾಡು ಕೂಡ ಒಂದು. ಬಾಯಲ್ಲಿಟ್ಟರೆ ಕರಗುವ ಈ ಲಾಡು ನಮ್ಮ ಮನೆಯಲ್ಲಿ ಎಲ್ಲರಿಗೂ ಇಷ್ಟ! ತುಪ್ಪ, ಸಕ್ಕರೆ, ಡ್ರೈ ಫ್ರೂಟ್ಸ್ ಎಲ್ಲವನ್ನೂ ಧಾರಾಳವಾಗಿ ಬಳಸಿ ತಯಾರಿಸುವ ಬೇಸನ್ ಲಾಡು ಆರೋಗ್ಯದ ದೃಷ್ಟಿಯಿಂದಲೂ ಒಳ್ಳೆಯದು. ಹಬ್ಬ - ಹರಿದಿನಗಳಲ್ಲಿ, ಮನೆಗೆ ಅತಿಥಿಗಳು ಬಂದಾಗ ತಯಾರಿಸಲು ಈ ಲಾಡು ಚೆನ್ನಾಗಿರುತ್ತದೆ.


ತಯಾರಿಸಲು ಬೇಕಾಗುವ ಸಮಯ: 40 ನಿಮಿಷಗಳು
ಡಿಫಿಕಲ್ಟಿ ಲೆವೆಲ್: ಮೀಡಿಯಮ್
ಈ ಅಳತೆಯಿಂದ 8 ಲಾಡುಗಳನ್ನು ತಯಾರಿಸಬಹುದು

ಬೇಕಾಗುವ ಸಾಮಗ್ರಿಗಳು:

  • ಕಡ್ಲೆಹಿಟ್ಟು - 2 ಕಪ್ (1 ಕಪ್ = 125 ಗ್ರಾಮ್)
  • ಸಕ್ಕರೆ - 1 ಕಪ್ 
  • ತುಪ್ಪ - 3/4 ಕಪ್ ಗಿಂತ 1 ಟೇಬಲ್ ಸ್ಪೂನ್ ಕಮ್ಮಿ 
  • ಏಲಕ್ಕಿಪುಡಿ - 1 ಟೀ ಸ್ಪೂನ್ (ಟಿಪ್ಸ್ ನೋಡಿ)
  • ಒಣದ್ರಾಕ್ಷಿ - 15
  • ಗೋಡಂಬಿ ಚೂರು - 2 ಟೇಬಲ್ ಸ್ಪೂನ್ 


ತಯಾರಿಸುವ ವಿಧಾನ:

  • ಒಂದು ದಪ್ಪ ತಳದ ಬಾಣಲೆಯಲ್ಲಿ ಕಡ್ಲೆಹಿಟ್ಟಿಗೆ ಮೇಲೆ ಹೇಳಿದಷ್ಟು ತುಪ್ಪ ಸೇರಿಸಿ ಸಣ್ಣ ಉರಿಯಲ್ಲಿ ಚೆನ್ನಾಗಿ ಪರಿಮಳ ಬರುವಂತೆ ಹುರಿಯಿರಿ. 
  • ಹಿಟ್ಟು ಅರ್ಧದಷ್ಟು ಹುರಿದನಂತರ ಇದಕ್ಕೆ ದ್ರಾಕ್ಷಿ, ಗೋಡಂಬಿ ಚೂರುಗಳನ್ನು ಸೇರಿಸಿ ಎಲ್ಲವನ್ನೂ ಒಟ್ಟಿಗೇ ಹುರಿಯಿರಿ. ಇಲ್ಲವೇ ಇವನ್ನು ಪ್ರತ್ಯೇಕವಾಗಿ ಹುರಿದು ಸೇರಿಸಿದರೂ ಆಯಿತು. 
  • ಸಕ್ಕರೆಯನ್ನು ಮಿಕ್ಸಿಯಲ್ಲಿ ನುಣ್ಣಗೆ ಪುಡಿಮಾಡಿಕೊಳ್ಳಿ. 
  • ಹುರಿದ ಹಿಟ್ಟನ್ನು ಸ್ವಲ್ಪ ಸಮಯ ತಣಿಯಲು ಬಿಡಿ. ಹಿಟ್ಟು ಉಗುರುಬೆಚ್ಚಗೆ ಇರುವಾಗ ಇದಕ್ಕೆ ಸಕ್ಕರೆಪುಡಿ, ಏಲಕ್ಕಿಪುಡಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. 
  • ತಯಾರಾದ ಹಿಟ್ಟಿನಿಂದ ಒಂದೇ ಅಳತೆಯ ಉಂಡೆಗಳನ್ನು ಮಾಡಿ. 



ಟಿಪ್ಸ್:

  • ಹಿಟ್ಟಿಗೆ ತುಪ್ಪ ಜಾಸ್ತಿ ಹಾಕಿದರೆ ಮೆತ್ತಗಾಗಿಬಿಡುತ್ತದೆ. ಹೀಗಾದರೆ ಉಂಡೆಗಳನ್ನು ಕಟ್ಟಿದ ತಕ್ಷಣ 15 - 20 ನಿಮಿಷ ಫ್ರಿಜ್ ನಲ್ಲಿಟ್ಟು ತೆಗೆಯಿರಿ. ಹೀಗೆ ಮಾಡುವುದರಿಂದ ಉಂಡೆಗಳು ಗಟ್ಟಿಯಾಗುತ್ತವೆ. 
  • ಏಲಕ್ಕಿಪುಡಿ ಇಲ್ಲದಿದ್ದರೆ ಸಕ್ಕರೆಯೊಡನೆ ಏಲಕ್ಕಿಯನ್ನೂ ಸೇರಿಸಿ ಪುಡಿಮಾಡಿಕೊಳ್ಳಿ. 


English version

ಕಾಮೆಂಟ್‌ಗಳು