ಎಗ್ ಲೆಸ್ ಸ್ಟ್ರಾಬೆರಿ ಐಸ್ ಕ್ರೀಮ್

ಮಕ್ಕಳಿಗೆ ಸಾಮಾನ್ಯವಾಗಿ ಇಷ್ಟವಾಗುವ ಹಣ್ಣುಗಳಲ್ಲಿ ಸ್ಟ್ರಾಬೆರಿಯೂ ಒಂದು. ನನ್ನ ಮಗಳಿಗೂ ಸ್ಟ್ರಾಬೆರಿ ಹಣ್ಣೆಂದರೆ ತುಂಬ ಇಷ್ಟ. ಆದರೆ ಈ ಹಣ್ಣು ಫ್ರಿಜ್ ನಲ್ಲಿಟ್ಟರೂ ಬೇಗ ಕೆಟ್ಟುಹೋಗುತ್ತದೆ. ಹಣ್ಣು ತಿಂದು ಖಾಲಿಯಾಗುವುದಿಲ್ಲವೆಂದಾದರೆ ನಮ್ಮ ಮನೆಯಲ್ಲಿ ಜ್ಯಾಮ್, ಮಿಲ್ಕ್ ಶೇಕ್, ಐಸ್ ಕ್ರೀಮ್ ಹೀಗೆ ಏನಾದರೊಂದನ್ನು ತಯಾರಿಸಿ ಸವಿಯುತ್ತೇವೆ. ಯಾವುದೇ ಕೃತಕ ಬಣ್ಣ, ಫ್ಲೇವರ್, ಪ್ರಿಸರ್ವೇಟಿವ್ ಗಳನ್ನು ಬಳಸದೆ ಮನೆಯಲ್ಲೇ ಸುಲಭದಲ್ಲಿ ತಯಾರಿಸಬಹುದಾದ ಈ ತಿನಿಸುಗಳು ಆರೋಗ್ಯಕ್ಕೂ ಒಳ್ಳೆಯದು.
ಸ್ಟ್ರಾಬೆರಿ ಐಸ್ ಕ್ರೀಮ್ ತಯಾರಿಸುವ ವಿಧಾನ ಈ ಕೆಳಗಿನಂತಿದೆ:  


ತಯಾರಿಸಲು ಬೇಕಾಗುವ ಸಮಯ: 25 ನಿಮಿಷಗಳು
ಕೂಲಿಂಗ್ ಟೈಮ್: 5 - 6 ಘಂಟೆ
ಸರ್ವಿಂಗ್ಸ್ - 7 ರಿಂದ 8 ಜನರಿಗೆ ಆಗುತ್ತದೆ

ಬೇಕಾಗುವ ಸಾಮಗ್ರಿಗಳು:

  • ಸ್ಟ್ರಾಬೆರಿ ಹಣ್ಣು - 250 ಗ್ರಾಂ 
  • ಥಿಕ್ ಕ್ರೀಮ್ - 250 ಗ್ರಾಂ
  • ಸಕ್ಕರೆ - 2 ಟೇಬಲ್ ಸ್ಪೂನ್ ಅಥವಾ ರುಚಿಗೆ ತಕ್ಕಷ್ಟು 


ತಯಾರಿಸುವ ವಿಧಾನ:

  • ಸ್ಟ್ರಾಬೆರಿ ಹಣ್ಣುಗಳನ್ನು ನೀರಿನಲ್ಲಿ ಚೆನ್ನಾಗಿ ತೊಳೆದು ತೊಟ್ಟು ತೆಗೆದು, ಸಣ್ಣ / ಮೀಡಿಯಂ ಸೈಜಿನ ಚೂರುಗಳಾಗಿ ಹೆಚ್ಚಿಕೊಳ್ಳಿ. 
  • ಥಿಕ್ ಕ್ರೀಮ್, ಹೆಚ್ಚಿದ ಸ್ಟ್ರಾಬೆರಿ ಮತ್ತು ಸಕ್ಕರೆಯನ್ನು ಒಟ್ಟಿಗೆ ಮಿಕ್ಸಿ / ಬ್ಲೆಂಡರ್ ನಲ್ಲಿ ಹಾಕಿ ನುಣ್ಣಗಾಗುವವರೆಗೆ ತಿರುವಿ. 
  • ತಯಾರಾದ ಮಿಶ್ರಣವನ್ನು ಗಾಳಿಯಾಡದ ಬಾಕ್ಸ್ ನಲ್ಲಿ ಹಾಕಿ 2 - 3 ಘಂಟೆಕಾಲ ಫ್ರೀಜರ್ ನಲ್ಲಿಡಿ. 
  • ಐಸ್ ಕ್ರೀಮ್ ಮಿಶ್ರಣ ಗಟ್ಟಿಯಾದ ನಂತರ ಇದನ್ನು ಫ್ರೀಜರ್ ನಿಂದ ತೆಗೆದು ಮಿಕ್ಸಿ / ಬ್ಲೆಂಡರ್ ನಲ್ಲಿ 4 - 5 ನಿಮಿಷ ತಿರುವಿ ಪುನಃ ಫ್ರೀಜರ್ ನಲ್ಲಿಡಿ. ಇದೇ ರೀತಿ 2 - 3 ಬಾರಿ ಮಾಡಿದರೆ ಐಸ್ ಕ್ರೀಮ್ ತೀರಾ ಗಟ್ಟಿಯಾಗದೆ, ಮೆತ್ತಗೆ ಚೆನ್ನಾಗಿ ಆಗುತ್ತದೆ. 
  • ಐಸ್ ಕ್ರೀಮ್ ಗಟ್ಟಿಯಾದ ನಂತರ ಫ್ರೀಜರ್ ನಿಂದ ತೆಗೆದು ಸವಿಯಿರಿ!



ಟಿಪ್ಸ್:




  • ಐಸ್ ಕ್ರೀಮ್ ನಲ್ಲಿ ಸ್ಟ್ರಾಬೆರಿ ಚೂರುಗಳು ಸಿಗಬೇಕೆಂದರೆ 3 - 4 ಸ್ಟ್ರಾಬೆರಿ ಹಣ್ಣುಗಳನ್ನು ಸಣ್ಣಗೆ ಹೆಚ್ಚಿ, ಮಿಶ್ರಣವನ್ನು ಕೊನೆಯಬಾರಿ ಮಿಕ್ಸಿಗೆ ಹಾಕಿದ ನಂತರ ಅದರೊಡನೆ ಮಿಕ್ಸ್ ಮಾಡಿ.  

ಕಾಮೆಂಟ್‌ಗಳು