Recipe world

Here are some recipes which I came across through the net, books, so on and few are my own experiments..

Thursday, 16 March 2017

ಎಗ್ ಲೆಸ್ ಸ್ಟ್ರಾಬೆರಿ ಐಸ್ ಕ್ರೀಮ್

ಮಕ್ಕಳಿಗೆ ಸಾಮಾನ್ಯವಾಗಿ ಇಷ್ಟವಾಗುವ ಹಣ್ಣುಗಳಲ್ಲಿ ಸ್ಟ್ರಾಬೆರಿಯೂ ಒಂದು. ನನ್ನ ಮಗಳಿಗೂ ಸ್ಟ್ರಾಬೆರಿ ಹಣ್ಣೆಂದರೆ ತುಂಬ ಇಷ್ಟ. ಆದರೆ ಈ ಹಣ್ಣು ಫ್ರಿಜ್ ನಲ್ಲಿಟ್ಟರೂ ಬೇಗ ಕೆಟ್ಟುಹೋಗುತ್ತದೆ. ಹಣ್ಣು ತಿಂದು ಖಾಲಿಯಾಗುವುದಿಲ್ಲವೆಂದಾದರೆ ನಮ್ಮ ಮನೆಯಲ್ಲಿ ಜ್ಯಾಮ್, ಮಿಲ್ಕ್ ಶೇಕ್, ಐಸ್ ಕ್ರೀಮ್ ಹೀಗೆ ಏನಾದರೊಂದನ್ನು ತಯಾರಿಸಿ ಸವಿಯುತ್ತೇವೆ. ಯಾವುದೇ ಕೃತಕ ಬಣ್ಣ, ಫ್ಲೇವರ್, ಪ್ರಿಸರ್ವೇಟಿವ್ ಗಳನ್ನು ಬಳಸದೆ ಮನೆಯಲ್ಲೇ ಸುಲಭದಲ್ಲಿ ತಯಾರಿಸಬಹುದಾದ ಈ ತಿನಿಸುಗಳು ಆರೋಗ್ಯಕ್ಕೂ ಒಳ್ಳೆಯದು.
ಸ್ಟ್ರಾಬೆರಿ ಐಸ್ ಕ್ರೀಮ್ ತಯಾರಿಸುವ ವಿಧಾನ ಈ ಕೆಳಗಿನಂತಿದೆ:  


ತಯಾರಿಸಲು ಬೇಕಾಗುವ ಸಮಯ: 25 ನಿಮಿಷಗಳು
ಕೂಲಿಂಗ್ ಟೈಮ್: 5 - 6 ಘಂಟೆ
ಸರ್ವಿಂಗ್ಸ್ - 7 ರಿಂದ 8 ಜನರಿಗೆ ಆಗುತ್ತದೆ

ಬೇಕಾಗುವ ಸಾಮಗ್ರಿಗಳು:

  • ಸ್ಟ್ರಾಬೆರಿ ಹಣ್ಣು - 250 ಗ್ರಾಂ 
  • ಥಿಕ್ ಕ್ರೀಮ್ - 250 ಗ್ರಾಂ
  • ಸಕ್ಕರೆ - 2 ಟೇಬಲ್ ಸ್ಪೂನ್ ಅಥವಾ ರುಚಿಗೆ ತಕ್ಕಷ್ಟು 


ತಯಾರಿಸುವ ವಿಧಾನ:

  • ಸ್ಟ್ರಾಬೆರಿ ಹಣ್ಣುಗಳನ್ನು ನೀರಿನಲ್ಲಿ ಚೆನ್ನಾಗಿ ತೊಳೆದು ತೊಟ್ಟು ತೆಗೆದು, ಸಣ್ಣ / ಮೀಡಿಯಂ ಸೈಜಿನ ಚೂರುಗಳಾಗಿ ಹೆಚ್ಚಿಕೊಳ್ಳಿ. 
  • ಥಿಕ್ ಕ್ರೀಮ್, ಹೆಚ್ಚಿದ ಸ್ಟ್ರಾಬೆರಿ ಮತ್ತು ಸಕ್ಕರೆಯನ್ನು ಒಟ್ಟಿಗೆ ಮಿಕ್ಸಿ / ಬ್ಲೆಂಡರ್ ನಲ್ಲಿ ಹಾಕಿ ನುಣ್ಣಗಾಗುವವರೆಗೆ ತಿರುವಿ. 
  • ತಯಾರಾದ ಮಿಶ್ರಣವನ್ನು ಗಾಳಿಯಾಡದ ಬಾಕ್ಸ್ ನಲ್ಲಿ ಹಾಕಿ 2 - 3 ಘಂಟೆಕಾಲ ಫ್ರೀಜರ್ ನಲ್ಲಿಡಿ. 
  • ಐಸ್ ಕ್ರೀಮ್ ಮಿಶ್ರಣ ಗಟ್ಟಿಯಾದ ನಂತರ ಇದನ್ನು ಫ್ರೀಜರ್ ನಿಂದ ತೆಗೆದು ಮಿಕ್ಸಿ / ಬ್ಲೆಂಡರ್ ನಲ್ಲಿ 4 - 5 ನಿಮಿಷ ತಿರುವಿ ಪುನಃ ಫ್ರೀಜರ್ ನಲ್ಲಿಡಿ. ಇದೇ ರೀತಿ 2 - 3 ಬಾರಿ ಮಾಡಿದರೆ ಐಸ್ ಕ್ರೀಮ್ ತೀರಾ ಗಟ್ಟಿಯಾಗದೆ, ಮೆತ್ತಗೆ ಚೆನ್ನಾಗಿ ಆಗುತ್ತದೆ. 
  • ಐಸ್ ಕ್ರೀಮ್ ಗಟ್ಟಿಯಾದ ನಂತರ ಫ್ರೀಜರ್ ನಿಂದ ತೆಗೆದು ಸವಿಯಿರಿ!



ಟಿಪ್ಸ್:




  • ಐಸ್ ಕ್ರೀಮ್ ನಲ್ಲಿ ಸ್ಟ್ರಾಬೆರಿ ಚೂರುಗಳು ಸಿಗಬೇಕೆಂದರೆ 3 - 4 ಸ್ಟ್ರಾಬೆರಿ ಹಣ್ಣುಗಳನ್ನು ಸಣ್ಣಗೆ ಹೆಚ್ಚಿ, ಮಿಶ್ರಣವನ್ನು ಕೊನೆಯಬಾರಿ ಮಿಕ್ಸಿಗೆ ಹಾಕಿದ ನಂತರ ಅದರೊಡನೆ ಮಿಕ್ಸ್ ಮಾಡಿ.  

Tuesday, 31 January 2017

ಹಾಲುಗುಂಬಳಕಾಯಿ ಪಾಯಸ । ಸೋರೆಕಾಯಿ ಪಾಯಸ

ಹಾಲುಗುಂಬಳ ಅಥವಾ ಸೋರೆಕಾಯಿ ನಮಗೆ ಇಲ್ಲಿ ವರ್ಷದ ಎಲ್ಲ ಕಾಲದಲ್ಲೂ ಸಾಮಾನ್ಯವಾಗಿ ಸಿಗುವ ತರಕಾರಿಗಳಲ್ಲಿ ಒಂದು.  ಚೀನಾ ದೇಶದವರೂ ಈ ತರಕಾರಿಯನ್ನು ಬಳಸುವುದರಿಂದ ಕೇವಲ ಭಾರತೀಯ ಅಂಗಡಿಗಳಲ್ಲಷ್ಟೇ ಅಲ್ಲದೆ ಏಶಿಯನ್ ಗ್ರಾಸರಿ ಅಂಗಡಿಗಳಲ್ಲೂ ಸೋರೆಕಾಯಿ ಸಿಗುತ್ತದೆ. ನಮ್ಮ ಮನೆಯಲ್ಲಿ ಹೆಚ್ಚಿನ ದಿನಗಳಲ್ಲಿ ಅಪ್ಪಟ ಭಾರತೀಯ ಶೈಲಿಯ ಅಡುಗೆಯಾದ್ದರಿಂದ ಸೋರೆಕಾಯಿ ಆಗಾಗ ಅಡುಗೆಯಲ್ಲಿ ಬಳಕೆಯಾಗುತ್ತಿರುತ್ತದೆ. ಅನೇಕ ವಿಟಾಮಿನ್ ಹಾಗೂ ಮಿನರಲ್ ಗಳ ಆಗರವಾಗಿರುವ ಈ ತರಕಾರಿಯ ನಿಯಮಿತ ಸೇವನೆ ಆರೋಗ್ಯದ ದೃಷ್ಟಿಯಿಂದಲೂ ಒಳ್ಳೆಯದು. 
ಹಾಲುಗುಂಬಳಕಾಯಿ ಪಲ್ಯ ತಯಾರಿಸುವ ವಿಧಾನವನ್ನು ಈ ಮೊದಲೇ ಬರೆದಿದ್ದೆ. ಹಾಲುಗುಂಬಳಕಾಯಿ ಬಳಸಿ ಪಾಯಸ ತಯಾರಿಸುವ ವಿಧಾನವನ್ನು ಇಂದು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ರುಚಿಕರವಾದ ಈ ಪಾಯಸವನ್ನು ನೀವೂ ತಯಾರಿಸಿ ನೋಡಿ!


ತಯಾರಿಸಲು ಬೇಕಾಗುವ ಸಮಯ: 35 - 40 ನಿಮಿಷಗಳು 
ಸರ್ವಿಂಗ್ಸ್: 3 ಜನರಿಗೆ ಆಗುತ್ತದೆ 
ಡಿಫಿಕಲ್ಟಿ ಲೆವೆಲ್: ಮೀಡಿಯಮ್ 

ಬೇಕಾಗುವ ಸಾಮಗ್ರಿಗಳು:

  • ಸಕ್ಕರೆ - 3/4 ಕಪ್ (1 ಕಪ್ =
  • ಸಿಪ್ಪೆ, ಬೀಜ ತೆಗೆದು ಸಣ್ಣಗೆ / ಮೀಡಿಯಂ ಸೈಜಿಗೆ ಹೆಚ್ಚಿದ ಹಾಲುಗುಂಬಳ ಹೋಳುಗಳು - 2 ಕಪ್ 
  • ಮೀಡಿಯಮ್ ರವೆ - 1/3 ಕಪ್ 
  • ಬೆಲ್ಲ - 2 ಟೇಬಲ್ ಚಮಚ (ಟಿಪ್ಸ್ ನೋಡಿ)
  • ಉಪ್ಪು - ದೊಡ್ಡ ಚಿಟಿಕೆ 
  • ತುಪ್ಪ - 1 ಟೀ ಚಮಚ 
  • ಹಾಲು - 2 1/2 ಕಪ್ 
  • ನೀರು - 2 1/2 ಕಪ್ 
  • ಏಲಕ್ಕಿಪುಡಿ - 1 ಟೀ ಚಮಚ
  • ಕೇಸರಿ ದಳ - 8 ರಿಂದ 10 (ಬೇಕಿದ್ದರೆ)

ತಯಾರಿಸುವ ವಿಧಾನ:

  • ಒಂದು ಪಾತ್ರೆಯಲ್ಲಿ ನೀರು ಬಿಸಿಗಿಡಿ. ಬೆಚ್ಚಗಾದ ನಂತರ ಇದಕ್ಕೆ ತುಪ್ಪ, ಹೆಚ್ಚಿದ ಹಾಲುಗುಂಬಳ ಸೇರಿಸಿ ಹಾಲುಗುಂಬಳ ಹೋಳುಗಳು ಮೆತ್ತಗಾಗುವವರೆಗೆ ಬೇಯಿಸಿ. 
  • ರವೆಯನ್ನು ನೀರಿನಲ್ಲಿ ತೊಳೆದು, ನೀರು ಬಸಿದಿಡಿ. 
  • ಹೋಳು ಮೆತ್ತಗಾದ ನಂತರ ಅದಕ್ಕೆ ತೊಳೆದ ರವೆ ಸೇರಿಸಿ ಗಂಟಾಗದಂತೆ ಎರಡು ನಿಮಿಷ ಕೈಯಾಡಿಸಿ. 
  • ನಂತರ ಇದಕ್ಕೆ ಉಪ್ಪು, ಸಕ್ಕರೆ, ಬೆಲ್ಲ, ಹಾಲು, ಕೇಸರಿದಳ ಸೇರಿಸಿ 8 - 10 ನಿಮಿಷ ಕುದಿಸಿ. 
  • ಕೊನೆಯಲ್ಲಿ ಏಲಕ್ಕಿಪುಡಿ ಸೇರಿಸಿ ಉರಿ ಆಫ್ ಮಾಡಿ. 
  • ಈ ಪಾಯಸವನ್ನು ಬಿಸಿಯಾಗಿಯೂ ತಿನ್ನಬಹುದು ಅಥವಾ ಫ್ರಿಜ್ ನಲ್ಲಿಟ್ಟು ತಣ್ಣಗೆ ಮಾಡಿಕೊಂಡೂ ಸವಿಯಬಹುದು. 


ಟಿಪ್ಸ್:

  • ಬೆಲ್ಲ ಇಷ್ಟವಾದರೆ ಸಕ್ಕರೆಯ ಪ್ರಮಾಣ ಕಡಿಮೆ ಮಾಡಿ, ಜಾಸ್ತಿ ಬೆಲ್ಲ ಬಳಸಿ. ಬೆಲ್ಲ ಇಷ್ಟವಾಗದಿದ್ದರೆ ಸಕ್ಕರೆಯೊಂದನ್ನೇ ಬಳಸಿ. ಜಾಸ್ತಿ ಬೆಲ್ಲ ಬಳಸುವುದಾದರೆ ಕೇಸರಿ ದಳಗಳನ್ನು ಸೇರಿಸದಿದ್ದರೂ ಆಗುತ್ತದೆ. 

Friday, 23 December 2016

ಕ್ಯಾಂಡೀಡ್ ಆರೆಂಜ್ ಪೀಲ್

ಕ್ರಿಸ್ ಮಸ್ ಹಬ್ಬ ಇನ್ನೇನು ಎರಡು ದಿನಗಳಿವೆ. ಮನೆಗಳು, ಶಾಪಿಂಗ್ ಮಾಲ್ ಎಲ್ಲಿ ನೋಡಿದರೂ ಹಬ್ಬದ ಸಂಭ್ರಮ ತುಳುಕಾಡುತ್ತಿದೆ. ಅಂಗಡಿಗಳಲ್ಲೆಲ್ಲ ಡಿಸ್ಕೌಂಟ್ ಮಾರಾಟ, ಅದನ್ನಂತೂ ಮಿಸ್ ಮಾಡುವ ಹಾಗೇ ಇಲ್ಲ!😁 ನಮ್ಮ ಮನೆಯಲ್ಲಿ ಕ್ರಿಸ್ ಮಸ್ ಆಚರಿಸುವ ರೂಢಿ ಇಲ್ಲ. ಆದರೆ ಕ್ರಿಸ್ ಮಸ್ ಸಮಯದಲ್ಲಿ ತಯಾರಿಸುವ ಫ್ರೂಟ್ ಕೇಕ್ ಅಥವಾ ಪ್ಲಮ್ ಕೇಕ್ ನಮಗೆಲ್ಲ ಇಷ್ಟ! ಹೀಗಾಗಿ ಕೇಕ್ ತಯಾರಿಸಲು ಬೇಕಾದ ಎಲ್ಲ ಸಿದ್ಧತೆಗಳೂ ಮನೆಯಲ್ಲಿ ನಡೆಯುತ್ತಿವೆ. 
ಕ್ಯಾಂಡೀಡ್ ಪೀಲ್ - ಇದು ಫ್ರೂಟ್ ಕೇಕ್ ತಯಾರಿಸಲು ಬೇಕಾಗುವ ಒಂದು ಪ್ರಮುಖ ಪದಾರ್ಥ. ಕಿತ್ತಳೆ, ನಿಂಬೆ ಇತ್ಯಾದಿ ಹುಳಿ ಹಣ್ಣುಗಳ ಸಿಪ್ಪೆಯನ್ನು ಬೇಯಿಸಿ ಅದರಲ್ಲಿನ ಕಹಿ ಅಂಶವನ್ನು ತೆಗೆದು ನಂತರ ಸಕ್ಕರೆ ಪಾಕದಲ್ಲಿ ಬೇಯಿಸಿ ಇದನ್ನು ತಯಾರಿಸಲಾಗುತ್ತದೆ. ಕ್ರಿಸ್ ಮಸ್ ಹಬ್ಬದ ಸಮಯದಲ್ಲಿ ಕ್ಯಾಂಡಿಡ್ ಪೀಲ್ ಹೆಚ್ಚಿನ ಅಂಗಡಿಗಳಲ್ಲಿ ಸುಲಭವಾಗಿ ಸಿಗುತ್ತದೆ. ಹಾಗೆಂದು ಇದನ್ನು ಮನೆಯಲ್ಲಿ ತಯಾರಿಸುವುದು ಕಷ್ಟವೇನಿಲ್ಲ. ನಾನು ಫ್ರೂಟ್ ಕೇಕ್ ತಯಾರಿಸುವಾಗಲೆಲ್ಲ ಕ್ಯಾಂಡೀಡ್ ಪೀಲ್ ನ್ನು ಮನೆಯಲ್ಲೇ ತಯಾರಿಸಿಕೊಳ್ಳುತ್ತೇನೆ. 
ಕ್ಯಾಂಡೀಡ್ ಆರೆಂಜ್ ಪೀಲ್ ರೆಸಿಪಿ ಈ ಕೆಳಗಿನಂತಿದೆ. ನಾನು ಇದನ್ನು ಕಲಿತದ್ದು ಸುಮಾ ಅವರ ವೆಬ್ ಸೈಟ್ ನಿಂದ. 


ತಯಾರಿಸಲು ಬೇಕಾಗುವ ಸಮಯ: 1 1/4 ಘಂಟೆ 
ಸೆಟ್ ಆಗಲು ಬೇಕಾಗುವ ಸಮಯ: 1 ಘಂಟೆ 
ಈ ಅಳತೆಯಿಂದ 30 - 32 ಒಂದೇ ಅಳತೆಯ ಕ್ಯಾಂಡೀಡ್ ಆರೆಂಜ್ ಪೀಲ್ಸ್ ತಯಾರಿಸಬಹುದು 
ಡಿಫಿಕಲ್ಟಿ ಲೆವೆಲ್: ಮೀಡಿಯಮ್ 

ಬೇಕಾಗುವ ಸಾಮಗ್ರಿಗಳು:
  • ಕಿತ್ತಳೆ ಹಣ್ಣು - 2 (ಮೀಡಿಯಮ್ ಸೈಜಿನವು)
  • ಸಕ್ಕರೆ - 1/2 ಕಪ್ 
  • ನೀರು - 1/2 ಕಪ್ + ಕಿತ್ತಳೆ ಸಿಪ್ಪೆ ಬೇಯಲು ಬೇಕಾಗುವಷ್ಟು 

ತಯಾರಿಸುವ ವಿಧಾನ:
  • ಕಿತ್ತಳೆ ಹಣ್ಣನ್ನು ಉದ್ದುದ್ದಕ್ಕೆ ನಾಲ್ಕು ಸಮಭಾಗಗಳಾಗಿ ಕತ್ತರಿಸಿ, ಸಿಪ್ಪೆಯನ್ನು ಹುಷಾರಾಗಿ ಬೇರ್ಪಡಿಸಿಕೊಳ್ಳಿ. 
  • ಸಿಪ್ಪೆಯನ್ನು ಒಂದೇ ಅಳತೆಯ ಚೂರುಗಳಾಗಿ ಹೆಚ್ಚಿಕೊಳ್ಳಿ. 
  • ಎರಡು ಕಪ್ ಅಥವಾ ಸಿಪ್ಪೆ ಮುಳುಗುವಷ್ಟು ನೀರನ್ನು ಒಂದು ಪಾತ್ರೆಯಲ್ಲಿ ಬಿಸಿಗಿಡಿ. ಇದಕ್ಕೆ ಸೀಳಿದ ಕಿತ್ತಳೆ ಸಿಪ್ಪೆ ಸೇರಿಸಿ 4 - 5 ನಿಮಿಷ ಕುದಿಸಿ. ನಂತರ ನೀರನ್ನು ಬಸಿದು ತೆಗೆಯಿರಿ. 
  • ಕಿತ್ತಳೆ ಸಿಪ್ಪೆಯ ಕಹಿ ಅಂಶ ಹೋಗಲು ಮೇಲೆ ಹೇಳಿದ ಸ್ಟೆಪ್ ನ್ನು 2 - 3 ಬಾರಿ ಪುನರಾವರ್ತನೆ ಮಾಡಿ. 
  • ಅರ್ಧ ಕಪ್ ನಷ್ಟು ನೀರಿಗೆ ಅರ್ಧ ಕಪ್ ನಷ್ಟು ಸಕ್ಕರೆ ಸೇರಿಸಿ ಬಿಸಿಗಿಡಿ. ಸಕ್ಕರೆ ಪೂರ್ತಿ ಕರಗಿದ ನಂತರ ಇದಕ್ಕೆ ಕಿತ್ತಳೆ ಸಿಪ್ಪೆಯ ಚೂರುಗಳನ್ನು ಸೇರಿಸಿ ಆದಷ್ಟು ಸಣ್ಣ ಉರಿಯಲ್ಲಿ ಬೇಯಿಸಿ. 
  • ಮುಕ್ಕಾಲು ಘಂಟೆ ಅಥವಾ ಒಂದು ಘಂಟೆಕಾಲ ಸಣ್ಣ ಉರಿಯಲ್ಲಿ ಬೇಯಿಸಿದಾಗ ಕಿತ್ತಳೆ ಸಿಪ್ಪೆಯ ಚೂರುಗಳು ಸಕ್ಕರೆ ಪಾಕವನ್ನೆಲ್ಲ ಹೀರಿಕೊಂಡು ಒಣಗಲು ಆರಂಭಿಸುತ್ತವೆ. ಸಕ್ಕರೆ ಪಾಕವೆಲ್ಲ ಒಣಗಿದ ನಂತರ ಉರಿ ಆಫ್ ಮಾಡಿ, ಕಿತ್ತಳೆ ಸಿಪ್ಪೆಯ ಚೂರುಗಳನ್ನು ಕೂಲಿಂಗ್ ಸ್ಟ್ಯಾಂಡ್ ಮೇಲೆ ಒಂದು ಘಂಟೆಕಾಲ ಹರವಿ ತಣ್ಣಗಾಗಲು ಬಿಡಿ. 
  • ತಯಾರಾದ ಕ್ಯಾಂಡೀಡ್ ಆರೆಂಜ್ ಪೀಲ್ ನ್ನು ಗಾಳಿಯಾಡದ ಕಂಟೇನರ್ ನಲ್ಲಿ ಹಾಕಿಟ್ಟು, ಬೇಕಾದಾಗ ಬಳಸಿ. 



ಟಿಪ್ಸ್:
  • ಇದೇ ವಿಧಾನದಲ್ಲೇ ಕಿತ್ತಳೆ ಸಿಪ್ಪೆಯ ಬದಲು ನಿಂಬೆಹಣ್ಣಿನ ಸಿಪ್ಪೆ ಬಳಸಿ ಕ್ಯಾಂಡೀಡ್ ಲೆಮನ್ ಪೀಲ್ ತಯಾರಿಸಬಹುದು. 

Thursday, 27 October 2016

ಡ್ರೈ ಫ್ರೂಟ್ಸ್ ಲಡ್ಡು । ಒಣ ಹಣ್ಣುಗಳ ಉಂಡೆ

ಕರ್ನಾಟಕದಲ್ಲಿ ಸಾಮಾನ್ಯವಾಗಿ ಯಾವುದೇ ಸ್ವೀಟ್ ಸ್ಟಾಲ್ ಗೆ ಹೋದರೂ ನಿಮಗೆ ಡ್ರೈ ಫ್ರೂಟ್ಸ್ ಉಂಡೆ ಕಾಣಸಿಗುತ್ತದೆ. ಗೋಡಂಬಿ, ಬಾದಾಮಿ, ಒಣದ್ರಾಕ್ಷಿ, ಗಸಗಸೆ, ಖರ್ಜೂರ ಇತ್ಯಾದಿ ಆರೋಗ್ಯಕ್ಕೆ ಉತ್ತಮವಾದ ಸಾಮಗ್ರಿಗಳನ್ನು ಬಳಸಿ ತಯಾರಿಸುವ ಈ ಉಂಡೆ ತಿನ್ನಲು ಬಹಳ ರುಚಿ! ಪುಟ್ಟ ಮಕ್ಕಳಿಂದ ವಯೋವೃದ್ಧರವರೆಗೂ ಎಲ್ಲ ವಯಸ್ಸಿನವರಿಗೂ ಈ ಉಂಡೆ ಬಹಳ ಒಳ್ಳೆಯದು. 
ನಮ್ಮ ಮನೆಯಲ್ಲಿ ಡ್ರೈ ಫ್ರೂಟ್ಸ್ ಮತ್ತು ನಟ್ಸ್ ತಿನ್ನುವುದೆಂದರೆ ಎಲ್ಲರಿಗೂ ಇಷ್ಟ. ಆದರೆ ದಿನವೂ ನಿಯಮಿತ ಪ್ರಮಾಣದಲ್ಲಿ ತಿನ್ನುವುದು ಸ್ವಲ್ಪ ಕಷ್ಟದ ವಿಷಯ; ಒಂದು ದಿನ ಜಾಸ್ತಿ ಡ್ರೈ ಫ್ರೂಟ್ಸ್ ತಿನ್ನುವುದು, ನಂತರ ಕೆಲವು ದಿನ ಅವನ್ನು ತಿನ್ನಲು ಮರೆತುಬಿಡುವುದು ಸಾಮಾನ್ಯವಾಗಿ ನಡೆಯುತ್ತಿರುತ್ತದೆ. ಅದರ ಬದಲು ಡ್ರೈ ಫ್ರೂಟ್ಸ್ ಉಂಡೆ ಮಾಡಿಟ್ಟರೆ ದಿನವೂ ಮರೆಯದೆ ಇಷ್ಟಪಟ್ಟು ತಿನ್ನುತ್ತೇವೆ! 
ನಾನು ತಯಾರಿಸುವ ಡ್ರೈ ಫ್ರೂಟ್ಸ್ ಉಂಡೆಯ ರೆಸಿಪಿ ಈ ಕೆಳಗಿನಂತಿದೆ:


ತಯಾರಿಸಲು ಬೇಕಾಗುವ ಸಮಯ: 40 ನಿಮಿಷಗಳು 
ಈ ಅಳತೆಯಿಂದ 30 ಮೀಡಿಯಂ ಅಳತೆಯ ಉಂಡೆಗಳನ್ನು ತಯಾರಿಸಬಹುದು 
ಡಿಫಿಕಲ್ಟಿ ಲೆವೆಲ್: ಮೀಡಿಯಮ್  

ಬೇಕಾಗುವ ಸಾಮಗ್ರಿಗಳು:

  • ಖರ್ಜೂರ (ಬೀಜ ತೆಗೆದು ಮಾಧ್ಯಮ ಅಳತೆಯ ಚೂರುಗಳಾಗಿ ಹೆಚ್ಚಿದ್ದು) - 2 ಕಪ್ (1 ಕಪ್ = 
  • ಹೆಚ್ಚಿದ ಬಾದಾಮಿ - 1/2 ಕಪ್ 
  • ಗೋಡಂಬಿ ಚೂರುಗಳು - 1/2 ಕಪ್ 
  • ಒಣದ್ರಾಕ್ಷಿ - 1/2 ಕಪ್
  • ಒಣಕೊಬ್ಬರಿ ತುರಿ - 1/2 ಕಪ್
  • ಗಸಗಸೆ - 1/4 ಕಪ್ 
  • ತುಪ್ಪ - 4 ಟೇಬಲ್ ಸ್ಪೂನ್ 


ತಯಾರಿಸುವ ವಿಧಾನ:

  • ಒಂದು ದಪ್ಪ ತಳದ ಬಾಣಲೆಯನ್ನು ಬಿಸಿಮಾಡಿ ಬಾದಾಮಿ ಚೂರುಗಳು, ಗೋಡಂಬಿ ಚೂರುಗಳು ಮತ್ತು ಗಸಗಸೆಯನ್ನು ಪ್ರತ್ಯೇಕವಾಗಿ ಹುರಿದುಕೊಳ್ಳಿ. 
  • ಅದೇ ಬಾಣಲೆಯಲ್ಲಿ ತುಪ್ಪವನ್ನು ಬಿಸಿಗಿಡಿ. ಇದಕ್ಕೆ ಖರ್ಜೂರದ ಚೂರುಗಳು ಮತ್ತು ಒಣದ್ರಾಕ್ಷಿ ಸೇರಿಸಿ ಕೈಯಾಡಿಸುತ್ತಿರಿ. ಮಿಶ್ರಣ ಮುದ್ದೆಯಂತಾದಾಗ ಉರಿಯನ್ನು ಆಫ್ ಮಾಡಿ. 
  • ಖರ್ಜೂರ - ಒಣದ್ರಾಕ್ಷಿ ಮಿಶ್ರಣಕ್ಕೆ ಉಳಿದೆಲ್ಲ ಸಾಮಗ್ರಿಗಳನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. 
  • ಮಿಶ್ರಣದಿಂದ ಬೇಕಾದ ಅಳತೆಯ ಉಂಡೆಗಳನ್ನು ಮಾಡಿ ಗಾಳಿಯಾಡದ ಡಬ್ಬದಲ್ಲಿ ಹಾಕಿಟ್ಟು ಬಳಸಿ. 

Tuesday, 20 September 2016

ಬಾಕ್ಲವಾ

'ಬಾಕ್ಲವ' - ಇದು ಟರ್ಕಿಯ ಒಂದು ಸುಪ್ರಸಿದ್ಧ ಸಿಹಿತಿಂಡಿ. ನಾನು ಇದರ ಹೆಸರನ್ನು ಅನೇಕಬಾರಿ ಕೇಳಿದ್ದರೂ ಎಂದೂ ತಿಂದಿರಲಿಲ್ಲ. ಸುಮಾರು ದಿನಗಳ ಹಿಂದೆ ಪರಿಚಿತರೊಬ್ಬರು ನಮ್ಮ ಮನೆಗೆ ಬರುವಾಗ ಬಾಕ್ಲವಾ ವನ್ನು ತಂದಿದ್ದರು. ಅದನ್ನು ತಿಂದ ನಂತರ ನೆಟ್ ನಲ್ಲಿ ಜಾಲಾಡಿ ಬಾಕ್ಲವಾ ತಯಾರಿಸುವ ವಿಧಾನ ತಿಳಿದುಕೊಂಡೆ.
ಬಾಕ್ಲವಾ ತಯಾರಿಸಲು ನನ್ನಬಳಿ ವಾಲ್ನಟ್ ಇರಲಿಲ್ಲ. ಹೀಗಾಗಿ ಬಾದಾಮಿಯನ್ನು ಬಳಸಿ ಬಾಕ್ಲವಾ ತಯಾರಿಸಿದ್ದಾಯಿತು. ಅಳುಕುತ್ತಲೇ ಬಾದಾಮಿ ಬಳಸಿದ್ದರೂ ಬಾಕ್ಲವ ತಯಾರಾದ ನಂತರ ಅದು ಅಂಗಡಿಯಿಂದ ತಂದದ್ದರಷ್ಟೇ ಚೆನ್ನಾಗಿತ್ತು.
ನಾನು ಈ ರೆಸಿಪಿಯನ್ನು ಆಲ್ ರೆಸಿಪೀಸ್.ಕಾಮ್ ಎನ್ನುವ ವೆಬ್ ಸೈಟ್ ನಲ್ಲಿ ನೋಡಿ ಚಿಕ್ಕಪುಟ್ಟ ಬದಲಾವಣೆಗಳೊಂದಿಗೆ ಟ್ರೈ ಮಾಡಿದ್ದು. ಇಲ್ಲಿದೆ ನೋಡಿ ಬಾಕ್ಲವ ರೆಸಿಪಿ!


ತಯಾರಿಸಲು ಬೇಕಾಗುವ ಸಮಯ: 35 ನಿಮಿಷಗಳು
ಬೇಕಿಂಗ್ ಟೈಮ್: 50 - 55 ನಿಮಿಷಗಳು
ಈ ಅಳತೆಯಿಂದ 40 ಬಾಕ್ಲವಾ ಪೀಸ್ ಗಳನ್ನು ತಯಾರಿಸಬಹುದು
ಡಿಫಿಕಲ್ಟಿ ಲೆವೆಲ್: ಕಠಿಣ

ಬೇಕಾಗುವ ಸಾಮಗ್ರಿಗಳು:

  • ಫಿಲೋ ಪೇಸ್ಟ್ರಿ ಶೀಟ್ಸ್- 375 ಗ್ರಾಂ 
  • ಬೆಣ್ಣೆ - 250 ಗ್ರಾಂ 
  • ಸಕ್ಕರೆ - 1 ಕಪ್ (1 ಕಪ್ = 200 ಗ್ರಾಂ)
  • ಬಾದಾಮಿ - 2 ಕಪ್ (ಟಿಪ್ಸ್ ನೋಡಿ)
  • ಸಕ್ಕರೆಪುಡಿ - 4 ಟೇಬಲ್ ಚಮಚ 
  • ನೀರು - 1 ಕಪ್ 
  • ರಸ ತೆಗೆದ ನಿಂಬೆಹಣ್ಣಿನ ಸಿಪ್ಪೆ - ಅರ್ಧ ಹಣ್ಣಿನದು 
  • ಲವಂಗ - 2
  • ಜೇನುತುಪ್ಪ - 6 ಟೇಬಲ್ ಚಮಚ 
  • ಚಕ್ಕೆ / ದಾಲ್ಚಿನ್ನಿ ಪುಡಿ - 1 ಟೀ ಚಮಚ 


ತಯಾರಿಸುವ ವಿಧಾನ:

  • ಫಿಲೋ ಪೇಸ್ಟ್ರಿಯನ್ನು ಫ್ರಿಜ್ ನಿಂದ ಸ್ವಲ್ಪ ಮೊದಲೇ ತೆಗೆದಿಟ್ಟಿರಿ. 
  • ಬಾದಾಮಿಯನ್ನು ಸಣ್ಣಗೆ ಹೆಚ್ಚಿ, ಸಣ್ಣ ಉರಿಯಲ್ಲಿ ಪರಿಮಳ ಬರುವಂತೆ ಅಥವಾ ಹೊಂಬಣ್ಣ ಬರುವವರೆಗೆ ಹುರಿಯಿರಿ. ತಣ್ಣಗಾದ ನಂತರ ಇದಕ್ಕೆ  4 ಟೇಬಲ್ ಚಮಚದಷ್ಟು ಸಕ್ಕರೆಪುಡಿ, 1 ಟೀ ಚಮಚ ದಾಲ್ಚಿನ್ನಿ ಪುಡಿ ಸೇರಿಸಿ ಮಿಕ್ಸ್ ಮಾಡಿ ತಣಿಯಲು ಬಿಡಿ.  
  • ಬೇಕಿಂಗ್ ಟ್ರೇ ಗೆ ಬೆಣ್ಣೆ ಸವರಿಕೊಳ್ಳಿ. ನಾನು ಇಲ್ಲಿ 33*23 cm ಬೇಕಿಂಗ್ ಟ್ರೇ ಬಳಸಿದ್ದೇನೆ. 
  • ಓವನ್ ನ್ನು 180 ಡಿಗ್ರಿಗೆ ಪ್ರಿ-ಹೀಟ್ ಮಾಡಿಕೊಳ್ಳಿ. 
  • ನಾಜೂಕಾಗಿ ಫಿಲೋ ಪೇಸ್ಟ್ರಿಯ ಎರಡು ಶೀಟ್ ಗಳನ್ನು ತೆಗೆದು ಬೇಕಿಂಗ್ ಟ್ರೇಯಲ್ಲಿ ಜೋಡಿಸಿ. ಅದರಮೇಲೆ ಕರಗಿಸಿದ ಬೆಣ್ಣೆಯನ್ನು ಸವರಿ, ಮೇಲಿನಿಂದ ಇನ್ನೆರಡು ಪೇಸ್ಟ್ರಿ ಶೀಟ್ ಗಳನ್ನು ಜೋಡಿಸಿ. ಅದರಮೇಲೆ ಬೆಣ್ಣೆ ಸವರಿ ಮತ್ತೆ ಎರಡು ಶೀಟ್ ಜೋಡಿಸಿ. ಅರ್ಧಭಾಗದಷ್ಟು ಶೀಟ್ ಗಳು ಖಾಲಿಯಾಗುವವರೆಗೆ ಇದೇ ರೀತಿ ಮಾಡಿ.  
  • ಇದರಮೇಲೆ ಬೆಣ್ಣೆ ಸವರಿ, ಬಾದಾಮಿ ಮಿಶ್ರಣವನ್ನು ಹರವಿ. 
  • ಬಾದಾಮಿ ಮಿಶ್ರಣ ಹರವಿದ ನಂತರ ಮೇಲಿನಿಂದ ಎರಡು ಪೇಸ್ಟ್ರಿ ಶೀಟ್ ಜೋಡಿಸಿ ಬೆಣ್ಣೆ ಸವರಿ. ಪೇಸ್ಟ್ರಿ ಶೀಟ್ ಖಾಲಿಯಾಗುವವರೆಗೂ ಹೀಗೆಯೇ ಎರಡು ಶೀಟ್ ಇಟ್ಟು ಮೇಲಿನಿಂದ ಬೆಣ್ಣೆ ಸವರುತ್ತ ಹೋಗಿ. 
  • ಎಲ್ಲ ಶೀಟ್ ಗಳನ್ನು ಜೋಡಿಸಿದ ನಂತರ ಬಾಕ್ಲವ ವನ್ನು ಒಂದೇ ಅಳತೆಯ ವಜ್ರಾಕೃತಿ ಅಥವಾ ನಿಮ್ಮಿಷ್ಟದ ಆಕಾರಕ್ಕೆ ಕತ್ತರಿಸಿ. ಬೇಕಿಂಗ್ ಟ್ರೇಯನ್ನು ಪ್ರಿ-ಹೀಟ್ ಮಾಡಿದ ಓವನ್ ನಲ್ಲಿಟ್ಟು 50 - 55 ನಿಮಿಷ ಅಥವಾ ಹೊಂಬಣ್ಣ ಬರುವವರೆಗೆ ಬೇಯಿಸಿ. 
  • ಬಾಕ್ಲವ ಬೇಯುತ್ತಿರುವಾಗ ಸಕ್ಕರೆಪಾಕ ತಯಾರಿಸಿಕೊಳ್ಳಿ. ಒಂದು ಪಾತ್ರೆಯಲ್ಲಿ ಸಕ್ಕರೆ, ನೀರು ಸೇರಿಸಿ ಬಿಸಿಗಿಡಿ. ಸಕ್ಕರೆ ಕರಗಿದನಂತರ ಇದಕ್ಕೆ ಲವಂಗ, ಜೇನುತುಪ್ಪ, ನಿಂಬೆ ಸಿಪ್ಪೆ ಸೇರಿಸಿ ಸಣ್ಣ ಉರಿಯಲ್ಲಿ 15 - 20 ನಿಮಿಷ ಕುದಿಸಿ ಉರಿ ಆಫ್ ಮಾಡಿ. ನಂತರ ಇದರಲ್ಲಿರುವ ಲವಂಗ ಮತ್ತು ನಿಂಬೆ ಸಿಪ್ಪೆಯನ್ನು ತೆಗೆದುಬಿಡಿ. 
  • ಬೆಂದ ಬಾಕ್ಲವ ಬಿಸಿ ಇರುವಾಗಲೇ ಅದರಮೇಲೆ ಮೊದಲೇ ತಯಾರಿಸಿಟ್ಟ ಸಕ್ಕರೆಪಾಕವನ್ನು ಸುರಿಯಿರಿ. ಸರ್ವ್ ಮಾಡುವ ಮೊದಲು ಇದನ್ನು 2 ಘಂಟೆಕಾಲ ಸೆಟ್ ಆಗಲು ಬಿಡಿ. 



ಟಿಪ್ಸ್: 
  • ನನ್ನ ಬಳಿ ವಾಲ್ನಟ್ ಇರದಿದ್ದರಿಂದ ಇಲ್ಲಿ ಬಾದಾಮಿ ಬಳಸಿದ್ದೇನೆ. ವಾಲ್ನಟ್ ಇದ್ದರೆ ಬಾಕ್ಲವ ತಯಾರಿಸಲು ಅದನ್ನೇ ಬಳಸಿ. 
Related Posts Plugin for WordPress, Blogger...